Wednesday, August 13, 2008

ನ ಚ ಕೇವಲ ತರ್ಕೇಣ


ಎರಡು ದಿನಗಳ ಕೆಳಗೆ ನಾನು ಭಾಗವಹಿಸುತ್ತಿರುವ ತೆಲುಗು ವೆಬ್ ಸೈಟ್ http://www.aavakaaya.com/ ನಲ್ಲಿ ವಿಶ್ವ ವಿಹಾರಿ ಎನ್ನುವವರು ಬರೆದ "ದೇವರ ಸುಳಿವು" ಎನ್ನುವ ಬರಹದಲ್ಲಿ ಇತ್ತೆಚಿಗೆ ಸುಳ್ಳೆಂದು ಸ್ಪಷ್ಟವಾದ ಅಯ್ಯಪ್ಪನ ಮಕರಜ್ಯೋತಿಯ ಬಗ್ಗೆ ಬರೆದಿದ್ದರು. ಅದರ ಪ್ರತ್ಯುತ್ತರ ರೂಪವಾಗಿ ಈ ಅಂಕಣವನ್ನು ಬರಿದಿದ್ದೀನಿ.

ಈ ಬರಹಕ್ಕಾಗಿ ನನಗೆ ಉಪಕರಿಸಿದ ಗ್ರಂಥ ಶ್ರೀ ಅಖಿಲ ಭಾರತ ಮಾಧ್ವ ಮಹಾ ಮಂಡಲ ಪ್ರಕಾಶನ "ಸರ್ವಮೂಲ ಗ್ರಂಥಗಳು - ದಶ ಪ್ರಕರಣಗಳು"

********************

ಒಂದು ವಾದವನ್ನು ವಿಚಾರಿಸುವಾಗ ಕೆಳಕಂಡ ವಿಷಯಗಳನ್ನ ನೋಡಬೇಕು ಅಂತ ಹೇಳುತ್ತಾರೆ:

೧) ವಾದದ ವಿಷಯವಾದರೂ ಏನು ?
೨) ಪ್ರತಿಪಾದನೆ ಮಾಡುತ್ತಿರುವ ವ್ಯಕ್ತಿಗಳ ಅರ್ಹೆತಗಳೇನು ?
೩) ಆ ವಾದದ ಅಧ್ಯಯನದಿಂದಾಗುವ ಪ್ರಯೋಜನವೇನು ?

ದೇವರು ಎನ್ನುವ ಭಾವನೆ ಅತಿ ತಿಳುವಲಿಕೆಯುಳ್ಳ ಕೆಲವು ಜನರ ಕಲ್ಪನೆಯೇ ಸರಿ ಅಂತ ನಾಸ್ತಿಕ, ಹೇತುವಾದಿಗಳು ಹೇಳುವುದು ಸರ್ವೇ ಸಾಧಾರಣ. ಅಂದರೇ ಇವರ ವಾದದ ಮುಖ್ಯ ವಿಷಯ "ದೇವರು".

ಈ ರೀತಿಯ ವಾದವನ್ನ ಮಂಡಿಸುವವರಲ್ಲಿ ಚೆನ್ನಾಗಿ ಓದಿದ್ದವರು, ಪರಿಶೋಧನೆಯಲ್ಲಿ ತೊಡಗಿರುವವರು ಇರುವುದರಿಂದ ಇವರ ಅರ್ಹತೆಗಳನ್ನ ನಾವು ಸಂಕಿಶುವಂತೇ ಇಲ್ಲ.

ಆದರೇ ಇವರ ವಾದಗಳಿಂದ ಆಗುವ ಪ್ರಯೋಜನಗಳಾದರೂ ಏನೆಂದು ನೋಡಿದಾಗ ಮಾತ್ರ "ಏನೂ ಇಲ್ಲ"ವೆಂದೇ ಅನಿಸುತ್ತದೆ. ಏಕೆಂದರೇ ಇವರ ವಾದಕ್ಕೆ ಮುಖ್ಯ ಆಧಾರ "ಶುದ್ಧ ತರ್ಕ"ವೇ ಹೊರೆತು ಮತ್ತೊಂದು ಇಲ್ಲ. ಈ ತರ್ಕವನ್ನ "ಒಣ ತರ್ಕ"ವೆಂದು ಕೆಲವರು ಆಸ್ತೀಕರು ವ್ಯಾಖ್ಯಾನಿಸುವುದೂ ಕೇಳಿ ಬರುತ್ತದೆ.

ಪ್ರಪಂಚದಲ್ಲಿನ ಎಲ್ಲಾ ವಿಷಯಗಳಿಗೂ ತರ್ಕವೇ ಸಮಾಧಾವಾದರೇ, ಆ ತರ್ಕಕ್ಕೆ ನಿಲುಕದ, ಸಿಲುಕದ ಅನೇಕ ಅನುಭವಗಳು, ಸನ್ನಿವೇಶಗಳು, ವಿಷಯಗಳು ಇವೆ. ಮುಖ್ಯವಾಗಿ ಹೃದಯ ಸಂಬಂಧವಾದ ಭಾವನೆಗಳ ವಿಷಯಗಳಲ್ಲಿ ತರ್ಕ ಕೆಲವೊಮ್ಮೇ ಹಾನಿಯೇ ಮಾಡುತ್ತದೆ. ಹಾಗಾಗಿ ಹೃದಯ ಸಂಬಂಧಿಗಳಾದ ಕವನ ಮುಂತಾದ ವಿಚಾರಗಳಲ್ಲಿ ಅತಿ ಹೆಚ್ಚಿನ ತರ್ಕ ಸಲ್ಲದೆಂದು ವಿಮರ್ಶಕರ ಪ್ರಗಾಢ ಅಭಿಪ್ರಾಯ.

ಬ್ರಹ್ಮಾಂಡ ಪುರಾಣ "ನ ಚ ಕೇವಲ ತರ್ಕೇಣ ನಾಕ್ಷಜೇಣ ನ ಕೇನ ಚಿತ್" ಅಂತ ಹೇಳುತ್ತದೆ. ದೇವರು ಮುಂತಾದ ಅತೀಂದ್ರಿಯ ವಿಚಾರಗಳಲ್ಲಿ ಕೇವಲ ಕಣ್ಣಿಗೆ ಕಾಣುವ ಪ್ರಮಾಣಗಳನ್ನೇ ಆಧಾರವಾಗಿ ತೊಗೊಳ್ಳುವುದು ಸರಿಯಲ್ಲವೆಂದು ಆ ಶ್ಲೋಕದ ಅಭಿಪ್ರಾಯ. ಅತೀಂದ್ರಿಯ ವಿಚಾರಗಳಲ್ಲಿ ಅಪೌರುಷೇಯವಾದ ವೇದ, ಉಪನಿಷತ್ ಮತ್ತೆ ಪುರಾಣಗಳನ್ನೇ ಆಧಾರವಾಗಿ ತೊಗೊಳ್ಳಬೇಕು ಎಂದು ಆ ಶ್ಲೋಕ ಹೇಳುತ್ತದೆ.

"ನೇಂದ್ರಿಯಾಣಾಂ ನಾನುಮಾನಂ ವೇದಾ ಹ್ಯೈವೈನಂ ವೇದಯಂತೀ ತಸ್ಮಾದಾಹುಃ ವೇದಾಃ" ಎಂದು ಪಿಪ್ಪಲ ಶೃತಿ ಹೇಳುತ್ತದೆ. ಈವತ್ತು ಇದ್ದು ನಾಳೆ ನಾಶ ಹೊಂದುವ ಇಂದ್ರಿಯಗಳಿಂದಲೂ, ಮತ್ತೊಬ್ಬನ ಪ್ರಬಲ ತರ್ಕಕ್ಕೆ ಬಿದ್ದುಹೋಗುವ ಬಲಹೀನ ತರ್ಕಗಳಿಂದಲೂ ಭಗವಂತನ ತಿಳಿಯಲು ಶಕ್ಯವಾಗುವದಿಲ್ಲ. ಅದು ಕೇವಲ ವೇದಗಳಿಂದಲೇ ಸಾಧ್ಯ. ಭಗವಂತನನ್ನು ಭಕ್ತನಿಗೆ ಆವೇದನ ಮಾಡಿಕೊಡುವುದರಿಂದಲೇ ಅವು ವೇದಗಳೆಂದು ಪ್ರಸಿದ್ಧಿ. ಆವೇದನೆ ಯೆಂದರೇ ನಾವು ಸಾಧಾರಣವಾಗಿ ಅರ್ಥಮಾಡುವಹಾಗೇ ಒಂದು ರೀತಿಯ ದುಃಖವಲ್ಲ. ಆ ಎಂದರೇ ಚೆನ್ನಾಗಿ (ಸ್ಯಮಂತಾತ್) ಎಂದರ್ಥ. ಯಾವುದಾದರೇ ಚೆನ್ನಾಗಿ ತಿಳಿಸಿಕೊಡುತ್ತಿದಿಯೋ ಅದೇ ವೇದ.

ಯಾಕೆ ವೇದ, ಪುರಾಣಗಳನ್ನೇ ಆಧಾರವಾಗಿ ತೊಗೊಳ್ಳಬೇಕು ? ಯಾಕೆ ನಾಸ್ತಿಕ, ಹೇತುವಾದದ ವಾಕ್ಯಗಳನ್ನ ಆಧಾರವಾಗಿ ಗ್ರಹಿಸಬಾರದು ?

ನಾವು ನೋಡುತಿದ್ದ ಹಾಗೇ ಈ ಪ್ರಪಂಚದಲ್ಲಿ ಯಾವ ವ್ಯಕ್ತಿಯೂ ಸಂಪೂರ್ಣ ಬುದ್ಧಿಶಕ್ತಿಯಿಂದ ಕೂಡಿಲ್ಲ. ಸದ್ಗುಣಗಳಿಲ್ಲ. ಸ್ಥಿರತ್ವವೂ ಇಲ್ಲ. ಹೀಗೆ ಅರ್ಧ ಸತ್ಯಗಳಿಂದ ಕೂಡಿದ್ದ ಮನುಷ್ಯರ ಮಾತುಗಳನ್ನಾದಾರೂ ಸಂಪೂರ್ಣ ಸತ್ಯವೆಂದು ನಂಬುವುದಾದರೂ ಹೇಗೇ? ಅವರ ವಾದವನ್ನಾದರೂ ಸ್ವೀಕರಿಸುವುದು ಹೇಗೇ ? ಯಾವ ವಾದವಾದರೇ ಮರು ವಾದಕ್ಕೆ ಅವಕಾಶ ಕೊಡದೇ ನಿಲ್ಲುತ್ತದೆಯೋ ಅದೇ ಸಿಧ್ಧಾಂತವಾಗ ಬಲ್ಲದು. ಮತ್ತೆಲ್ಲವೂ ರಾದ್ಧಾಂತಗಳೇ ಸರಿ. ಹಾಗಾಗಿ ಮನುಷ್ಯಮಾತ್ರರೆಂದ ಪ್ರಚಲಿತವಾದ ಎಲ್ಲಾ ವಾದಗಳು ರಾದ್ಧಾಂತಗಳೇ. ಅಷ್ಟೇ ಅಲ್ಲದೇ ಮುಂದೆ ಹೇಳಿದ ಹಾಗೆ ಕೇವಲ ತರ್ಕದಿಂದ ಅತೀಂದ್ರಿಯ ವಿಷಯಗಳನ್ನ ತೀರ್ಮಾನ ಮಾಡುವುದು ಅರ್ಥರಹಿತವೇ. ದುಃಖ ದೌರ್ಬಲ್ಯಗಳಿಂದ ಕೂಡಿ, ಯಾವ ವಸ್ತುವಿನ ಸಂಪೂರ್ಣ ಜ್ಣಾನವಿಲ್ಲದಿರುವ ಮನುಷ್ಯರು ಹೇಗೆ ತಾನೇ ಶಾಶ್ವತನೂ, ಸುಮೇಧನು, ದೋಷದೂರನೂ ಆದ ಭಗವಂತನ ಅಸ್ತಿತ್ವವನ್ನು ಪ್ರಶ್ನಿಸಬಲ್ಲ ? ಇಲ್ಲವೇ ಇಲ್ಲವೆಂದು ನಿರೂಪಿಸಬಲ್ಲ ?

ಅದಕ್ಕೇ ದೊಡ್ಡವರು ಹೀಗೆ ಹೇಳಿದರು "ಹೇಗೇ ನೂರಾರು ಜನರಲ್ಲಿ ತಾಯಿ ತನ್ನ ಮಗುವನ್ನು ಗುರುತಿಸಬಳ್ಲಲೋ, ಹೇಗೆ ನಕ್ಷತ್ರಗಳ ಮಧ್ಯದಲ್ಲೂ ಚಂದ್ರನನ್ನ ಗುರುತಿಸ ಬಲ್ಲರೋ ಹಾಗೆಯೇ ಪರಮಾತ್ಮನನ್ನೂ ನಾವು ಪ್ರಯತ್ನದಿಂದ ಗುರುತಿಸಬಹುದು". ಪ್ರಯತ್ನಮೇವ ಅಗ್ರಜಂ ಎಂದು ತಾನೇ ಶ್ರೀಮದಾಚಾರ್ಯರು ಹೇಳಿರುವುದು !

ಹೀಗೆ ಪ್ರಯತ್ನಪೂರ್ವಕ ವಾದ ಸಾಧನದಿಂದ ಪ್ರಾಪ್ತಿಯಾಗ ತಕ್ಕ ಪರಮಾತ್ಮನನ್ನು ಪ್ರಾಚೀನಾಚಾರ್ಯಯ ಗ್ರಂಥಗಳ ಆಧಾರದ ಮೇಲೆ ಕಾಣುವುದು ಬಿಟ್ಟು ಯಾರು ಯಾರೋ ಸುಳ್ಳುಬಾಕರ ಮಾಯೆಗಳಿಗೇ, ಮ್ಯಾಜಿಕ್ಕುಗಳಿಗೇ ಮರುಳಾಗಿ ಆ ನಿರುಪಯೋಗ ಚೇಷ್ಟೇಗಳಿಂದನೇ ಪರಮಾತ್ಮನನ್ನು ಕಂಡುಕೊಳ್ಳುವ ಮೂರ್ಖ ಜನರಿಗೆ ಸುಜ್ಣಾನ ಬರುವುದಾದರೂ ಹೇಗೆ ?

"ಅಂತರಂಗದಲಿ ಹರಿಯ ಕಾಣದವ ಹುಟ್ಟೂ ಕುರುಡನೋ" ಎಂದು ದಾಸರಾಯರು ಹೇಳಿದ್ದು ಇವರ ವಿಚಾರದಲ್ಲಿ ಸತ್ಯವಾದ ಮಾತು ತಾನೇ !!