Sunday, August 24, 2008

ಶ್ರೀ ರುಕ್ಮಿಣೀಶ ವಿಜಯ - ಅದ್ಭುತವಾದ ಕೃಷ್ಣಲೀಲೆಯ ವರ್ಣನೆ


ನಿದ್ರಾ ಮಾಶ್ರಯ ಕಿಂ ತದಾಶ್ರಯಫಲಂ ಭುಕ್ತಂ ವ್ರಜೇಜ್ಜೀರ್ಣಿತಾಂ
ನಿದ್ರಾ ಕಾಂಬ ನಿಮಿಲಿತಾಕ್ಷಿ ಯುಗಲಃ ಪ್ರಾಜ್ಣಂ ಯದಾಲಿಂಗತಿ
ಆಸ್ತ್ವೇವನ್ವಿತಿ ಮುದ್ರಿತಾತ್ಮ ನಯನಃ ಸ್ವಾಂಗಂ ಸಮಾಲಿಂಗ್ಯ ತತ್
ಸರ್ವಂ ಜೀರ್ಣಮಥೋ ದಿಶೇತಿ ಜನನೀಂ ಶಂಸನ್ನಿಜಂ ಸೋವತಾತ್

ಅರ್ಥ: ಯಶೋದೆಯು ತೂಗುತ್ತಾ ಹೇ ಕೃಷ್ಣಾ ನಿದ್ರಿಸಪ್ಪಾ ಎನಲು

ಶ್ರೀಕೃಷ್ಣ:-- ಅಮ್ಮಾ ! ನಿದ್ರೆಯ ಫಲವೇನು ?
ಯಶೋದೆ:-- ಭುಕ್ತವಾದುದೆಲ್ಲವೂ ಜೀರ್ಣವಾಗುವುದು
ಶ್ರೀಕೃಷ್ಣ:-- ಅಮ್ಮಾ ನಿದ್ರೆ ಎಂದರೇನು ?
ಯಶೋದೆ:-- ಪ್ರಾಜ್ಣ ನಾಮಕ ಪರಮಾತ್ಮನನ್ನು ಆಲಂಗಿಸಿ ಕಣ್ಣು ಮುಚ್ಚುವುದು, ಎನಲು

ಶ್ರೀಕೃಷ್ಣನು ತನ್ನೆರಡು ಕೈಗಳಿಂದ ತನ್ನೆದೆಯನ್ನೇ ಆಲಂಗಿಸಿ ಕಣ್ಣುಗಳನ್ನು ಮುಚ್ಚಿ, ಚಟ್ಟನೇ ತೆರೆದು "ಅಮ್ಮಾ ! ಎಲ್ಲವೂ ಜೀರ್ಣವಾಯಿತು ಇನ್ನು ಕೊಡು" ಎಂದು ಯಶೋದೆಯನ್ನು ಮುಗ್ಧಗೊಳಿಸಿದ ಶ್ರೀಕೃಷ್ಣನು ನಮ್ಮಗಳನ್ನು ರಕ್ಷಿಸಲಿ.
********************
ಮಾತಾರ್ಗಾಯಸಿ ಕಿಂ ಸದಾ ಜಲನಿಧೌ ಶೇಷಾಂಗ ಸಂಶಾಯಿನಂ
ತಾತಾಸೌ ನನು ನಿದ್ರಯಾ ಪರಿವೃತೋ ದದ್ಯಾತ್ತವಾಪೀತಿ ತಾಮ್
ಏವಂ ಚೇದ್ಗದಿತಂ ತದೀಯಮಖಿಲಂ ತತ್ಕರ್ಣದೇಶಂ ಕಥಂ
ಯಾತೀತಿ ಪ್ರತಿಪಾದಯನ್ನಿಜಮತಂ ಪಾಯಾದ್ಯಶೋದಾ ಸುತಃ

ಅರ್ಥ: ಯಶೋದೆಯು ಹಾಡುತ್ತಾ ತೂಗುತ್ತಿರಲು:

ಶ್ರೀಕೃಷ್ಣ:-- ಅಮ್ಮಾ ! ಯಾರನ್ನು ಕುರಿತು ಹಾಡುತ್ತೀಯಿ ?
ಯಶೋದೆ:-- ಕ್ಷೀರ ಸಮುದ್ರದಲ್ಲಿ ಶೇಷಪರ್ಯಂಕಸಾಯಿ ಯಾದ ಶ್ರೀಹರಿಯನ್ನು ಕೃಷ್ಣಾ !
ಶ್ರೀಕೃಷ್ಣ:-- ಅಮ್ಮಾ ! ನಮಗೇನು ಫಲ ?
ಯಶೋದೆ:-- ಶ್ರೀಹರಿಯು ಆನಂದದಿಂದ ನಿದ್ರಿಸುತ್ತಿರುವನು ಅಂತಹವನನ್ನು ಹಾಡಿದರೇ ನಿನಗೂ ಸುಖನಿದ್ರೆಯನ್ನು ಕೊಡುವನು
ಶ್ರೀಕೃಷ್ಣ:-- ಹಾಗಾದರೇ ನೀನು ಹಾಡುವುದು ಅವನ ಕಿವಿಗೆ ಕೇಳುವುದು ಹೇಗೆ ?

ಹೀಗೆಂದು ತಾಯಿಯ ಬಾಯಿಯನ್ನೇ ಬಂಧಿಸಿ ಆ ಶ್ರೀಹರಿಯು ನಾನೇ ಎಂಬ ಸ್ವಾಭಿಪ್ರಾಯವನ್ನು ಸ್ವವಿಲಾಸದಿಂದ ತೋರಿದ ಶ್ರೀಕೃಷ್ಣ ನಮ್ಮನ್ನು ರಕ್ಷಿಸಲಿ.

(ಕನ್ನಡಾನುವಾದ - ಶ್ರೀ ಸಾಣುರು ಭೀಮಭಟ್ಟರು)