Tuesday, July 22, 2008

ಪದ ನೋಡು !

ಸುಧ ಓದಿ ಪದ ನೋಡು ಎನ್ನುವುದು ಮಾಧ್ವರ ಮನೆ ಮಾತು. ನನಗೆ ತೆಳದ ದಾಸರ ಪದಗಳಲ್ಲಿ, ನನಗೆ ತೋಚಿದ ಅರ್ಥಗಳನ್ನ ಇಲ್ಲಿ ಬರೆದಿಡ್ತಾಯಿದ್ದೀನಿ. "ಶುಭಾನ್ ಧ್ಯಾಯಂತಿ ಯೇ ಕಾಮ: ಗುರುದೇವ ಪ್ರಸಾದಿತ: ತದ್ದಿತರಾನ್ ಆತ್ಮ ಪಾಪೋತ್ಠಾನ್" ಎಂದ ಆರ್ಯ ವಚನದಂತೇ ಈ ಲೇಖನಗಳಲ್ಲಿನ ಒಳ್ಳೆಯ ವಿಚಾರಗಳು ನನ್ನ ಗುರುಗಳಾದ ಶ್ರೀ ಪುಷ್ಕರಪ್ರಸಾದ್ ಆಚಾರ್ಯರಿಗೇ ಸೇರುತ್ತದೇ. ಎಲ್ಲಾ ರೀತಿಯ ಲೋಪದೋಷಗಳು ಕೇವಲ ನನ್ನ ಅಜ್ಣಾನದಿಂದಲೇ........

ಪದ - ೧

ಧನ ನಿಲ್ಲದಯ್ಯ ಸಾಧನ ನಿಲ್ಲುವುದಯ್ಯ
ತನು ನಿಲ್ಲದಯ್ಯ ದಾತನು ಎಣಿಸಯ್ಯ ಧನ

ಜನ ಬರುವರೋ ಸಜ್ಜನ ಬಾರರಯ್ಯ
ಅನುಸರಿಸಿ ಜೀವನ ಪೊರೆಯಯ್ಯ ಧನ

ಹಣ ಪೂಟ್ಟುವುದೊ ಸುಗುಣ ಪುಟ್ಟದಯ್ಯ
ಗುಣನಿಧಿ ಹರಿ ಗುಣ ಗುಣಿಸಿ ಬಾಳಯ್ಯಾ ಧನ

ಭಾಗ್ಯನಿಧಿ ವಿಠಲನ ಆಜ್ಣ ಇದಯ್ಯ
ಸುಜ್ಣನರ ಸೇವಿಸಿ ಪ್ರಾಜ್ಣನಾಗಯ್ಯಾ ಧನ

ನನ್ನ ಭಾವನ:

ಧನ ಮನುಷ್ಯ ಕೃತ. ಸಾಧನ ಪರಮಾತ್ಮನ ಕೃಪೆ. ಮೊದಲಿನದು ಅಶಾಶ್ವತ. ಎರಡನೆಯದು ಶಾಶ್ವತ. ತನುವು ಒಂದು ಜಡ ಪದಾರ್ಥ. ನಶ್ವರ. ದಾತೃತ್ವ ಗುಣ. ಅದು ಅನಶ್ವರ. ಹೀಗಾಗಿ ದಾಸರಾಯರು ಅಶಾಶ್ವತವಾದ ಮನುಷ್ಯಕೃತ ವ್ಯವಹಾರಗಳನು ಬಿಟ್ಟು ಶಾಶ್ವತವಾದ ಪಾರಮಾರ್ಥಿಕ ಹಾದಿಯ ಹಿಡಿಯುವ ಆಲೋಚನೆಯನ್ನು ಮಾಡು ಎಂದು ಪಲ್ಲವಿಯಲ್ಲಿ ಸೂಚಿಸುತ್ತಾರೇ.

ಕೇವಲ ಹುಟ್ಟು ಸಾವುಗಳ ಮಧ್ಯ ನಿರಂತರ ಪಯಣವನ್ನು ಮಾಡುತ್ತಿರುವುವರು ಜನ. ಇವುಗಳ ಬಿಡುಗಡೆಗಾಗಿ ಹುಡುಕಾಟ ನಡೆಸುವರು ಸಜ್ಜನ. ಈ ಸಜ್ಜನರು ಬಹು ಅಪುರೂಪ. ಅಂತಹ ಅಪುರೂಪದ ಸಜ್ಜನರನ್ನು ಹಿಂಬಾಲಿಸುವುದು ಸಾಧಕ ಅವಶ್ಯ ಕರ್ತವ್ಯ.

ಹೇಗೆ ಶುಕ್ಲಶೋಣಿಯುಕ್ತರಾದ ಸಾಮಾನ್ಯ ಜನರು ಹುಟ್ಟುತ್ತಾರೆಯೋ ಹಾಗೇ ಅವರದೇ ಸೃಷ್ಟಿಯಾದ ಹಣವೂ. ಅದು ಹುಟ್ಟುತ್ತಲೇ ಇರುತ್ತದೇ. ಬಂದ ಹಾಗೆಯೇ ಹೋಗುತ್ತ್ತಾ ಇರುತ್ತದೆ. ಇದು ನಿಲ್ಲುವುದು ಅನುಮಾನವೇ ಸರಿ. ಆದರೇ ಸಂಸ್ಕಾರ ಪ್ರೇರಿತವಾದ ಸುಗುಣ ಆಗಲ್ಲ. ಅದನ್ನು ಖರ್ಚು ಮಾಡಿದಷ್ಟೂ ಇನ್ನೂ ಹೆಚ್ಚುತ್ತದೆ. ಮನುಷ್ಯನ ಹುಟ್ಟುವ ಜೊತೆಯಲೇ ಪೂರ್ವಜನ್ಮ ಸಂಸ್ಕಾರವಶಾತ್ ಬರುವುದೇ ಸುಗುಣ. ಹಾಗಾಗಿ ಅದು ಆಗಿಂದಾಗ್ಗೇ ಹಣದ ಹಾಗೇ ಹುಟ್ಟುವುದಲ್ಲ. ಇಂತಹ ಗುಣವೇ ಶಾಶ್ವತನಾದ ಹರಿಯ ಗುಣಗಳನ್ನ ತಿಳಿಯಬಲ್ಲದು. ಅಷ್ಟೇ ಅಲ್ಲದೇ ಮತ್ತೇ ಮತ್ತೇ ಹರಿಯ ಗುಣಗಳನ್ನ ಗುಣಿಸಿ, ಗುಣಿಸಿ, ಗುಣಿಸಿ...ಅವು ಅನಂತ ಎಂದು ತಿಳಿಯುತ್ತದೆ.

ಇಂತಹ ಸುಗುಣಶೀಲಿಗಳಿಗೆ ವಿಠಲ ಸುಜ್ಣರ ಸೇವಿಸುವಂತೇ ಆಜ್ಣ ಆಗಿದೇ. ಯಾರು ಈ ಸುಜ್ಣರು ?. "ಸು ಸಮೀಚೀನತ್ವಾತ್" ಎನ್ನುವ ವ್ಯುತ್ಪತ್ತಿಯನ್ನನುಸರಿಸಿ ಸಮೀಚೀನ ವಾದ ಜ್ಣಾನವುಳ್ಳವರು. "ಜ್ಣಾನದೊಳಗೆ ವ್ಯಾಸ, ಸುಖಮುನಿಯೇನೋ ನೀನು" ಎಂದು ಪುರಂದರದಾಸರು ಕೇಳಿದಹಾಗೇ ವೇದವ್ಯಾಸ, ಮತ್ತೇ ಅವರ ಸಾಕ್ಷಾತ್ ಶಿಷ್ಯರಾದ ಶ್ರೀಮದಾನಂದತೀರ್ಥರ ಅಭಿಮತವನ್ನು ಅನುಸರಿಸಿ ನಡೆಯುವರೇ ಸುಜ್ಣಾನಿಗಳು. ಅಂತಹ ಅವರ ಸೇವಾದಿಗಳಿಂದಲೇ ಅನುಮಾನರಹಿತವಾದ ಜ್ಣಾನಪ್ರಾಪ್ತಿ. ಯೇತತ್ಜ್ಣಾನ ದಿಂದಲೇ ಮುಕ್ತಿ.

***ಶ್ರೀ ಕೃಷ್ಣಾರ್ಪಣಮಸ್ತು***

No comments: